ಕಾಫ್ಕಾ, ಫ್ರಾನ್ಜ್

 1883-1924 ಆಸ್ಟ್ರಿಯದ ಕಾದಂಬರಿಕಾರ ಹಾಗೂ ಪ್ರಬಂಧಕಾರ. ಯೆಹೂದಿ ಮನೆತನದಲ್ಲಿ ಹುಟ್ಟಿದ. ತಂದೆಯ ಉಗ್ರಶಿಸ್ತಿನಲ್ಲಿ ಬೆಳೆದ. 1906ರಲ್ಲಿ ಪ್ರೇಗ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಪಡೆದು ಕೆಲಸಕ್ಕೆ ಸೇರಿದ.

 ಕಾಫ್ಕಾ ಧರ್ಮದೃಷ್ಟಿಯುಳ್ಳವ. ಆತನ ಪಾಲಿಗೆ ಬರೆವಣಿಗೆ ಪ್ರಾರ್ಥನೆಯಿದ್ದಂತೆ. ಯೆಹೂದಿಗಳ ಧರ್ಮಶಾಸ್ತ್ರ, ತಾಲ್ಮದ್, ಪಾಸ್ಕಲನ ಧರ್ಮತತ್ತ್ವ ಕರ್‍ಕೆಗಾಡ್‍ನ ಅನುಭೂತಿ-- ಇವು ಈತನ ಮನೋಧರ್ಮವನ್ನು ರೂಪಿಸಿದ ಶಕ್ತಿಗಳು. ಮಾನವನ ಅಸಹಾಯಕ ಸ್ಥಿತಿ, ತಾನು ಪಾಪಾತ್ಮನೆಂಬ ಭಾವನೆ ಹಾಗೂ ದೇವರಲ್ಲಿನ ಅಚಲ ನಂಬಿಕೆ-- ಇವು ಈತನ ಕ್ರಿಯಾಶೀಲ ಬರೆವಣಿಗೆಗೆ ಸ್ಪೂರ್ತಿ ನೀಡಿದ ಅಂಶಗಳು.

 ನಿಜಜೀವನದ ಸೂಕ್ಷ್ಮಾತಿ ಸೂಕ್ಷ್ಮಗಳ ವಿವರಣೆ, ಪಾತ್ರಗಳು ಸಿಕ್ಕಿಬೀಳುವ ಭಯಂಕರ ಸನ್ನಿವೇಶಗಳು, ಅವುಗಳಿಗೆ ಉಚಿತವೆನಿಸುವ ಶೈಲಿ-ಇವನ್ನು ಈತನ ಎಲ್ಲ ಕೃತಿಗಳಲ್ಲೂ ಕಾಣಬಹುದು. ಕ್ಷಯರೋಗಕ್ಕೆ ತುತ್ತಾಗಿ ಈತ ಪ್ರಾಣತೆತ್ತ. ಈತನ ಕೆಲವು ಕೃತಿಗಳು ಈತ ಜೀವಿಸಿದ್ದಾಗಲೇ ಪ್ರಕಟವಾದವು. ಕೆಲವನ್ನು ಮರಣಾನಂತರ ಈತನ ಸ್ನೇಹಿತ ಮ್ಯಾಕ್ಸ್ ಬ್ರಾಡ್ ಪ್ರಕಟಿಸಿದ. ಅವುಗಳಲ್ಲಿ ದಿ ಟ್ರಯಲ್ (1935), ದಿ ಕ್ಯಾಸಲ್ (1926), ಅಮೆರಿಕ (1927) ಇವು ಮುಖ್ಯವಾದುವು. ಇವು ಇಂಗ್ಲಿಷಿಗೆ ಭಾಷಾಂತರಗೊಂಡಿವೆ. ಮ್ಯಾಕ್ಸ್ ಬ್ರಾಡನೇ ಸಂಪಾದಿಸಿ ಪ್ರಕಟಿಸಿರುವ ದಿ ಯಡರೀಸ್ ಆಫ್ ಫ್ರಾನ್ಜ್ ಕಾಫ್ಕಾದಲ್ಲಿ ಕಾಫ್ಕಾನ ಜೀವನ ವಿವರಗಳೂ ದೃಷ್ಟಿ ಧ್ಯೇಯಗಳೂ ಕಾಣಸಿಗುತ್ತವೆ.       

 (ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ